ಬೆಂಗಳೂರು : ಐಸಿಸ್ ಉಗ್ರಸಂಘಟನೆಯ ನಂಟನ್ನು ಹೊಂದಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಅಬ್ದುರ್ ರಹಮಾನ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಸಂಘರ್ಷದಲ್ಲಿ ಗಾಯಗೊಂಡ ಐಸಿಸ್ ಕಾರ್ಯಕರ್ತರಿಗೆ ಚಿಕಿತ್ಸೆ ಕೊಡುವಂತಹ ಮತ್ತು ಐಸಿಸ್‌ನ ಅನುಕೂಲಕ್ಕಾಗಿ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಈತ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ರಹಮಾನ್ (28), ಐಸಿಸ್ ಭಯೋತ್ಪಾದಕರ ಚಿಕಿತ್ಸೆಗಾಗಿ 2014 ರ ಆರಂಭದಲ್ಲಿ ಸಿರಿಯಾದ ಐಸಿಸ್ ವೈದ್ಯಕೀಯ ಶಿಬಿರಕ್ಕೆ ಭೇಟಿ ನೀಡಿದ್ದರು ಮತ್ತು ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರೊಂದಿಗೆ 10 ದಿನಗಳ ಕಾಲ ಇದ್ದು ಭಾರತಕ್ಕೆ ಮರಳಿದ್ದರು ಎಂದು ಎನ್ಐಎ ತಿಳಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ದೆಹಲಿಯ ಜಾಮಿಯಾ ನಗರದಿಂದ ಬಂಧಿಸಲ್ಪಟ್ಟ ಕಾಶ್ಮೀರಿ ದಂಪತಿಗಳಾದ ಜಹನ್‌ಜೈಬ್ ಸಾಮಿ ವಾನಿ ಮತ್ತು ಹಿನಾ ಬಶೀರ್ ಬೀಗ್ ವಿರುದ್ಧ ಏಜೆನ್ಸಿಯ ತನಿಖೆಗೆ ಸಂಬಂಧಿಸಿದಂತೆ ಬೆಂಗಳೂರಿನ ಬಸವನಗುಡಿ ನಿವಾಸಿ ರಹಮಾನ್ ನನ್ನು ಸೋಮವಾರ ಬಂಧಿಸಲಾಯಿತು.
ಈ ಪ್ರಕರಣವನ್ನು ದೆಹಲಿ ಪೊಲೀಸ್ 2020 ರ ಮಾರ್ಚ್‌ನಲ್ಲಿ ಸಾಮಿ ಮತ್ತು ಬೀಘ್ ಬಂಧನದ ನಂತರ ದಾಖಲಿಸಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಎಸ್ ಕೆ ಪಿ ( ಇಸ್ಲಾಮಿಕ್ ಸ್ಟೇಟ್ ಆ ಖೋರಸನ್ ಪ್ರಾವಿನ್ಸ್) ಗೆ ಸಂಬಂಧ ಇದೆ ಎಂದು ತಿಳಿದು ಬಂದಿದೆ. ಇದು ಐಸಿಸ್ ನ ಒಂದು ಭಾಗವಾಗಿದ್ದು, ವಿಧ್ವಂಸಕ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.