ವಿಟ್ಲ: ಕೋಡಪದವು ಶ್ರೀಧರ ಭಟ್ ಕುಕ್ಕುಮನೆ ಅವರ ಪುತ್ರಿ ಚಾಂದಿನಿ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗೆ ಫಲಿತಾಂಶ ಪ್ರಕಟವಾದಾಗ ಆಂಗ್ಲ ಭಾಷೆಯಲ್ಲಿ 13 ಅಂಕ ಬಂದು ಅನುತ್ತೀರ್ಣರಾಗಿದ್ದರೆಂದು ತಿಳಿಸಲಾಗಿತ್ತು. ಕಾಲೇಜಿನ ಉತ್ತಮ ವಿದ್ಯಾರ್ಥಿನಿಗಳಲ್ಲಿ ಒಬ್ಬಳಾದ ಚಾಂದಿನಿ ಇದನ್ನು ನಂಬಲಿಲ್ಲ. ಅವಳು ಬರೆದ ಉತ್ತರದ ಮೇಲೆ ಅವಳಿಗೆ ನಂಬಿಕೆ ಇತ್ತು ಹಾಗೂ ಆಕೆ ಫೇಲ್ ಆಗುವ ವಿದ್ಯಾರ್ಥಿನಿಯಲ್ಲವೆಂದು ಮನೆಯವರಿಗೂ ಆಕೆಯ ವಿದ್ಯಾಸಂಸ್ಥೆಗೂ ಭರವಸೆ ಇತ್ತು.
ಮನೆಯಾರೆಲ್ಲರೂ ಸೇರಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದರು. ಅದರಂತೆ ಆಕೆಯ ಹೆತ್ತವರು ಸ್ಕ್ಯಾನಿಂಗ್ ಪ್ರತಿ ಪಡೆಯಲು 530 ರೂ ಪಾವತಿಸಿ ಉತ್ತರ ಪತ್ರಿಕೆಯನ್ನು ತರಿಸಿದರು. ಉತ್ತರ ಪತ್ರಿಕೆ ಬಂದು ತಪ್ಪಿದ್ದೆಲ್ಲಿ ಎಂಬುದು ಪರೀಕ್ಷಿಸುವಾಗ ಅಸಲಿ ಯಡವಟ್ಟು ಬಯಲಾಯಿತು. ಪ್ರಥಮ ಪುಟದಲ್ಲೇ ಆಕೆಗೆ ಅಂಕ ೮೩ ಎಂದು ನಮೂದಿಸಲಾಗಿತ್ತು. ಅಂಕ ಧಾಖಲಿಸುವ ವೇಳೆ ಇಲಾಖೆಯು ಮಾಡಿದ ಎಡವಟ್ಟು ಈ ಪ್ರಕರಣಕ್ಕೆ ಕಾರಣವಾಯಿತು.