ಪೊಳಲಿ ರಾಜರಾಜೇಶ್ವರಿ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ತಾನ. ಶ್ರೀ ರಾಜರಾಜೇಶ್ವರಿ ಇಲ್ಲಿಯ ಪ್ರಮುಖ ದೇವರು. ಈ ದೇವಾಲಯದ ನಿರ್ಮಾಣ ಕಾರ್ಯ ಕ್ರಿ.ಶ ೮ ನೇ ಶತಮಾನದಲ್ಲಿ ರಾಜ ಸುರಥನ ಕಾಲದಲ್ಲಿ ಪ್ರಾರಂಭಗೊಂಡು ತದನಂತರದ ಅನೇಕ ರಾಜರ ಆಡಳಿತಾವಧಿಯಲ್ಲಿ ಪೂರ್ಣವಾಯಿತು . ಇಲ್ಲಿಯ ಶ್ರೀ ವಿಗ್ರಹವು ಪೂರ್ಣವಾಗಿ ವಿಶೇಷ ಔಷಧಿಯುಕ್ತ ಗುಣಗಳಿಂದ ಕೂಡಿದ ಮಣ್ಣಿನಿಂದ ಅಚ್ಚಲ್ಪಟ್ಟಿದೆ. ಪ್ರತಿದಿನ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರೀ ದೇವರ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ.
ಕ್ಷೇತ್ರ ಹಿನ್ನಲೆ
ಈ ಧಾರ್ಮಿಕ ಕ್ಷೇತ್ರವು ಹಿರಿಯರ ಕಾಲದಿಂದಲೂ ಪುರಳ್ ಎಂದೇ ಜನಪ್ರೀಯ. ಪುರಳ್ ಎಂದರೆ ತುಳು ಭಾಷೆಯಲ್ಲಿ ಕೊಳಲು ಎಂದರ್ಥ. ಪುರಳ್ ಪದದ ಮೂಲ ಮುಗೇರ ಭಾಷೆ. ಪುರಳ್ ಪದಕ್ಕೆ ಬದಲಾದ ಬದಿ ಎಂಬರ್ಥವೂ ಇದೆ. ಈ ಅರ್ಥವು ಪೊಳಲಿ ದೇವಸ್ಥಾನದ ಸಮೀಪದಲ್ಲೇ ನದಿಯು ಹಠಾತ್ತನೆ ತಿರುವು ಪಡೆಯುದರಿಂದ ಬಂದಿದೆ ಎನ್ನಲಾಗಿದೆ. ಇನ್ನು ಸಂಸ್ಕೃತದಲ್ಲಿ ಈ ಕ್ಷೇತ್ರವನ್ನು ಪಳಿಯಾಪುರ ಎಂದೂ ನಂತರದ ಸಮಯದಲ್ಲಿ ಇದೇ ಪದ ಕನ್ನಡದಲ್ಲಿ ಪೊಳಲಿ ಎಂದು ಪ್ರಸಿದ್ಧವಾಯಿತು ಎಂಬ ನಂಬಿಕೆ ಕ್ಷೇತ್ರದ ಜನರದ್ದು.
ಕ್ಷೇತ್ರ ಇತಿಹಾಸ
ಮಾರ್ಕಂಡೇಯ ಪುರಾಣ, ಅಶೋಕ ಶಾಸನ ಸೇರಿದಂತೆ ಅನೇಕ ಪ್ರಾಚೀನ ಶಾಸನಗಳಲ್ಲಿ ಈ ದೇವಾಲಯವನ್ನು ಉಲ್ಲೇಖಿಸಲಾಗಿದೆ. ದೇವಸ್ಥಾನದ ಸುತ್ತಮುತ್ತ ಪರಿಸರದಲ್ಲಿ ದೊರೆತ ಶಾಸನಗಳ ಪ್ರಕಾರ , ಈ ಕ್ಷೇತ್ರವು ಕ್ರಿ.ಶ ೮ ನೇ ಶತಮಾನದಲ್ಲಿ ರಾಜ ಸುರಥನ ಕಾಲದಲ್ಲಿ ಸ್ಥಾಪಿಸಲ್ಪಟ್ಟು , ಶ್ರೀ ದೇವರ ಆಭೂಷಣವಾಗಿ ತನ್ನ ರಾಜ ಮುಕುಟ , ವಿಶೇಷ ಆಭರಣಗಳೊಂದಿಗೆ ಪೂಜಿಸಲು ಪ್ರಾರಂಭಿಸಿದನೆಂದು ಹೇಳಲಾಗಿದೆ. ಒಂದು ಕಾಲದಲ್ಲಿ ರಾಜ ಸುರಥನು ಯುದ್ಧದ ಪರಿಣಾಮವಾಗಿ ತನ್ನ ಬಹುತೇಕ ರಾಜ್ಯ ಹಾಗು ಆಪ್ತ ಮಂತ್ರಿಗಳನ್ನು ಕಳೆದುಕೊಂಡ ಸಂದರ್ಭದಲ್ಲಿ ,ಈ ಕ್ಷೇತ್ರದ ಸಮೀಪದ ಅರಣ್ಯ ಪ್ರದೇಶದಲ್ಲಿ ರಾಜನು ಮುನಿ ಸುಮೇಧರ ಆಶ್ರಯದಲ್ಲಿ ಶರಣಾಗತಗೊಂಡನೆಂದು , ಅಲ್ಲಿ ರಾಜನು ಶ್ರೀ ದೇವರ ಮಣ್ಣಿನ ವಿಗ್ರಹವನ್ನು ರೂಪಿಸಿದನೆಂದು ಇತಿಹಾಸದಲ್ಲಿ ನಂಬಲಾಗಿದೆ . ಇತಿಹಾಸದ ಪ್ರಕಾರ ಈ ಕ್ಷೇತ್ರ ಹಾಗು ಸುತ್ತಮುತ್ತಲಿನ ಪ್ರದೇಶಗಳನ್ನು ಆಳಿದ ಪ್ರಮುಖ ರಾಜವಂಶಗಳೆಂದರೆ ಕದಂಬರು, ಚಾಲುಕ್ಯರು,ಅಳುಪರು ,ರಾಷ್ಟ್ರಕೂಟರು,ಹೊಯ್ಸಳರು,ವಿಜಯನಗರ ,ಇಕ್ಕೇರಿ ಹಾಗು ಮೈಸೂರು. ತದನಂತರದ ಕಾಲಘಟ್ಟದಲ್ಲಿ ಕೆಳದಿಯ ರಾಣಿ ಚೆನ್ನಮ್ಮ ಈ ಕ್ಷೇತ್ರಕ್ಕೆ ಅದ್ಧೂರಿ ರಥವನ್ನು ನೀಡಿದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ವಾಸ್ತುಶಿಲ್ಪ
ಇತಿಹಾಸಕಾರ ಅಬ್ದುಲ್ ರಾಝ್ಯಾಕ್ ಪ್ರಕಾರ ಈ ದೇವಾಲಯವನ್ನು ಕರಗಿಸಿದ ಹಿತ್ತಾಳೆಯಿಂದ ಸ್ಥಾಪಿಸಲು ಪ್ರಾರಂಭಿಸಿದರೆಂದು ಹೇಳಿದ್ದಾನೆ . ಈತನ ಪ್ರಕಾರ ಈ ದೇವಾಲಯಕ್ಕೆ ೪ ಪ್ರಮುಖ ವೇದಿಕೆಗಳು ಇತ್ತು. ಈ ವೇದಿಕೆಯಲ್ಲಿ ಕೆಂಪು ಮಾಣಿಕ್ಯಗಳೊಂದಿಗೆ ಹೊಳೆಯುವ ಶ್ರೀ ದೇವರ ೫ ರಿಂದ ೬ ಇಂಚು ಎತ್ತರದ ಚಿತ್ರ ಇದ್ದು, ನೋಡಲು ಅತ್ಯಂತ ಮನಮೋಹಕವಾಗಿದೆ. ಈ ದೇವಾಲಯವು ಶ್ರೀ ದೇವರ ಜೊತೆಗೆ ಇತರೆ ದೇವರುಗಳಾದ ಸುಬ್ರಮಣ್ಯ , ಭದ್ರಕಾಳೀ ,ಮಹಾಗಣಪತಿ ಹಾಗು ಸರಸ್ವತಿ ಯವರ ವಿಗ್ರಹಗಳನ್ನೂ ಹೊಂದಿದೆ. ಇಲ್ಲಿಯ ಮುಖಮಂಟಪದ ಒಂದು ಭಾಗದಲ್ಲಿ ದೇವ , ದೇವತೆಗಳ ಕೆತ್ತನೆಗಳನ್ನು ಕಾಣಬಹುದಾಗಿದೆ. ಮೇಲ್ಚಾವಣಿಯ ಇತರೆ ಭಾಗ ತಾಮ್ರದ ಫಲಕದಿಂದ ಶೋಭಿಸಲಾಗಿದೆ.
ಪೂಜೆಗಳು
ಶ್ರೀ ಕ್ಷೇತ್ರದಲ್ಲಿ ಪ್ರತಿನಿತ್ಯ ದಿನಪೂಜೆ ಹಾಗು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ದಿನಂಪ್ರತಿ ಪ್ರಾತಃ ಕಾಲದ ಪೂಜೆಯು ಸಮಯ ೮ ಘಂಟೆ ೩೦ ನಿಮಿಷಕ್ಕೆ , ಮಧ್ಯಾಹ್ನದ ಪೂಜೆಯು ಸಮಯ ೧೨ ಘಂಟೆ ೩೦ ನಿಮಿಷಕ್ಕೆ ಹಾಗು ರಾತ್ರಿ ಪೂಜೆಯು ಸಮಯ ೮ ಘಂಟೆ ೩೦ ನುಮಿಷಕ್ಕೆ ನೆರವೇರಿಸಲಾಗುತ್ತದೆ. ಇಲ್ಲಿ ನಡೆಯುವ ವಿಶೇಷ ಪೂಜೆಗಳು ನಡೆಯುವ ಸಂದರ್ಭಗಳೆಂದರೆ :
- ಸಿಂಹ ಸಂಕ್ರಮಣ
- ಸೌರಮಾನ ಯುಗಾದಿ
- ಗೋಕುಲಾಷ್ಟಮಿ
- ಭಾದ್ರಪದ ಶುಕ್ಲದ ೪ ನೇ ದಿನ
- ಕ್ಕದಿರು ಹಬ್ಬ
- ನವರಾತ್ರಿ
- ದೀಪಾವಳಿ
- ಕಾರ್ತೀಕ ಬಹುಳ ಪಾಡ್ಯ
- ಲಕ್ಷ ದೀಪವೋತ್ಸವ (ಕಾರ್ತೀಕ ಹುಣ್ಣಿಮೆ ಯಂದು )
- ಸುಬ್ರಮಣ್ಯ ಪಂಚಮಿ ಹಾಗು ಷಷ್ಠಿ ಹಬ್ಬಗಳು
- ಧನುರ್ಮಾಸೋತ್ಸವ
- ಮಹಾಶಿವರಾತ್ರಿ
- ವಾರ್ಷಿಕ ಜಾತ್ರೋತ್ಸವ (ಮೀನ ಮಾಸದ ಸಂಕ್ರಾಂತಿ ಯಂದು )
ಪೊಳಲಿ ಚೆಂಡು
ಕಾಲ್ಚೆಂಡಿನ ಹಬ್ಬ ಎಂದೇ ಪ್ರಸಿದ್ದವಾದ ಹಬ್ಬ ಪೊಳಲಿ ಚೆಂಡು. ಪೊಳಲಿ ಚೆಂಡನ್ನು ಅವಬೃಥ ದ ೭ ದಿನ ಮುಂಚಿತವಾಗಿ,ವಾರ್ಷಿಕ ಜಾತ್ರೆಯ ೫ ದಿನ ಮುಂಚಿತವಾಗಿ ಆಚರಿಸಲಾಗುತ್ತದೆ . ಈ ಚೆಂಡನ್ನು ಮಿಜಾರಿನ ಚಮ್ಮಾರರ ಒಂದು ಮನೆ ಚರ್ಮದಿಂದ ಹೊಸೆದು ಮಾಡುತ್ತದೆ . ಈ ಚೆಂಡನ್ನು ಚಮ್ಮಾರರ ಮನೆಯಿಂದ ತರುವ ಜವಾಬ್ಧಾರಿ ಕಡಪು ಕರಿಯ ಅವರದ್ದಾಗಿರುತ್ತದೆ. ಪ್ರಥಮ ದಿನದ ಸಂಜೆ ಹೂತ್ತಿಗೆ ಚಮ್ಮಾರ ಕುಟುಂಬ ಈ ಚೆಂಡನ್ನು ದೇವರ ಮುಂಭಾಗದಲ್ಲಿ , ದೇವಸ್ಥಾನದ ಗೋಪುರದಲ್ಲಿ ತಾಳೆ ಎಳೆಯನ್ನು ಇಟ್ಟು ದೇವರಲ್ಲಿ ಪ್ರಾರ್ಥಿಸುತ್ತಾರೆ . ತದನಂತರ ಈ ಚಂಡನ್ನು ಚೆಂಡಾಟವಾಡಲು ಕೊಡುತ್ತಾರೆ. ಇಲ್ಲಿ ೫೦೦ ರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಒಟ್ಟು ಸೇರಿ ಈ ಆಟವನ್ನು ಆಡುತ್ತಾರೆ . ಇದನ್ನು ಇಲ್ಲಿಯ ಜನ ಕೆಡುಕಿನ ಮೇಲೆ ಒಳ್ಳೆಯದರ ಹೊಡೆದಾಟ , ಹಾಗು ರಥೋತ್ಸವದ ಕೊನೆಯ ದಿನ ಅಟ್ಟದ ಮುಕ್ತಾಯದೊಂದಿಗೆ ಕೆಟ್ಟದರ ಮೇಲೆ ಒಳ್ಳೆದರ ಗೆಲುವು ಎಂದು ಹೇಳುತ್ತಾರೆ
ವಾರ್ಷಿಕ ಜಾತ್ರೆಯು ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ . ಇದು ಒಂದು ತಿಂಗಳ ಜಾತ್ರೆ. ಈ ಸಂದರ್ಭದಲ್ಲಿ ಶ್ರೀ ದೇವರನ್ನು ಪ್ರಭಾವತಿ ಎಂಬ ವೃತ್ತಾಕಾರದ ಕಿರೀಟ ಇಟ್ಟು ಅತ್ಯಂತ ಸೊಗಸಾಗಿ ಶೋಭಿಸಲಾಗುತ್ತದೆ . ಜಾತ್ರೆಯ ೪ ನೇ ದಿನ ದೇವರ ಮೂರ್ತಿಯನ್ನು , ದೇವಳದಿಂದ ಸ್ವಲ್ಪವೇ ದೂರದಲ್ಲಿರುವ ಸಿಂಹಾಸನ ಕಟ್ಟೆಯಲ್ಲಿಟ್ಟು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.
ಸ್ಥಳ ವಿವರ
ದೇವಸ್ಥಾನವು ಬಂಟ್ವಾಳ ತಾಲೂಕಿನ , ಕರಿಯಂಗಳ ಗ್ರಾಮದ ಫಾಲ್ಗುಣಿ ನದಿಯ ತಟದಲ್ಲಿದ್ದು ,ಸಮೃದ್ಧವಾದ ಬತ್ತದ ಗದ್ದೆಗಳಿಂದ ಸುತ್ತುವರಿಯಲ್ಪಟ್ಟಿದೆ
ಹತ್ತಿರದ ಸ್ಥಳಗಳೆಂದರೆ
ಬಿ. ಸಿ ರೋಡ್ , ಕೈಕಂಬ , ಮಂಗಳೂರು