Yakshagana An Art of Coastal Karnataka | ಯಕ್ಷಗಾನ ಕರಾವಳಿ ಕರ್ನಾಟಕದ ಕಲೆ

0
Yakshagana


Yakshagana

ಕರಾವಳಿ ಭಾಗದ ಗಂಡು ಮೆಟ್ಟಿದ ಕಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ Yakshagana ಯಕ್ಷಗಾನ ಇಂದು ಕಡಲ ತೀರದ ಮಕ್ಕಳ ಜನಪದ ಕಲೆಯಾಗಿದೆ.

ತಲತಲಾಂತರ ವರ್ಷಗಳಿಂದಲೂ ನಮ್ಮ ಆಚಾರ ವಿಚಾರಕ್ಕೆ ಯಕ್ಷ ಭಾಷೆಯ ಸೊಬಗಕೊಟ್ಟು ಇಂದಿಗೂ ಉಳಿಸಿಕೊಂಡು ಬಂದಿರುವ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ಕೆವಲ ಮನೋರಂಜನೆ ಮಾತ್ರವಾಗಿರದೇ ಒಂದು ಸಾಮಾಜಿಕ ಸಂದೇಶ ನೀಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನೆಲೆಯಲ್ಲಿಯೂ ಸಹ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.

yakshagana art

ನೃತ್ಯ, ಮಾತುಗಾರಿಕೆ, ಹಾಡುಗಾರಿಕೆ, ವೇಷ ಭೂಷಣ ಹೊಂದಿರುವ ಈ ಕಲೆ ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು. Udupi ಉಡುಪಿ, ದಕ್ಷಿಣ ಕನ್ನಡ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಾಸರಗೋಡು, ಶಿವಮೊಗ್ಗ, ಚಿಕ್ಕಮಗಳೂರು ಇನ್ನೂ ಅನೇಕ ಕಡೆಗಳಲ್ಲಿ ಯಕ್ಷಗಾನ ಬಯಲಾಟ ಎಂಬ ಹೆಸರಿನಿಂದ ನಾಮಾಂಕಿತವಾಗಿದೆ. ಹಿಂದೆಲ್ಲ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಹಿನ್ನೆಲೆ, ಪೌರಾಣಿಕ ಘಟನೆಗಳು, ಐತಿಹಾಸಿಕ ಘಾಟನೆಗಳನ್ನು ಹೆಚ್ಚಾಗಿ ಯಕ್ಷಗಾನದ ಕಥಾವಸ್ತುವಾಗಿ ಪರಿಗಣಿಸುತ್ತಿದ್ದರು ಆದರೆ ಇಂದು ಕಾಲ ಬದಲಾದಂತೆ ಜನರ ಮನೋರುಚಿ ಬದಲಾಗಿದ್ದು ಸಿನೆಮಾ ಕಥೆಗಳು ಯಕ್ಷ ಸೊಬಗಿನಲ್ಲಿ ಮತ್ತೆ ಮರುಕಳಿಸುವತ್ತ ಹೊರಟಿದೆ.

ಹಿಂದೆ ಬಯಲಾಟ ಎಂಬ ಪದ ಹೆಚ್ಚು ಪ್ರಖ್ಯಾತಿಯನ್ನು ಹೊಂದಿದ್ದು ಯಕ್ಷಗಾನ ಎನ್ನುವ ಪೂರ್ತಿ ನಾಮಾಂಕಿತ ಇತ್ತೀಚಿನ ಪದವಾಗಿದೆ. ಬಯಲಾಟ ಅಂದರೆ ಬಯಲಲ್ಲಿ ಆಡುವ ಆಟ ಎಂದೆ ಜನಮಾನ್ಯತೆ ಪಡೆದಿತ್ತು. ಶಿವರಾಮ ಕಾರಂತ, ಬೇಂದ್ರೆ ಮುಂತಾದವರ ಸಾಹಿತಿಕ ಅಂಶ ಯಕ್ಷಗಾನದ ವಿಶಾಲ ಅರ್ಥವನ್ನು ಸಂಶೋಧನಾ ದೃಷ್ಟಿಯಿಂದ ವಿಸ್ತರಿಸುತ್ತಾ ಹೋಯಿತು.
ಪರಿಣಾಮ ಯಕ್ಷಗಾನ ವಿಸ್ತರಿತ ರೂಪ ಪಡೆಯುತ್ತಾ ಬಯಲಾಟದ ಪರಿಕಲ್ಪನೆ ಮಾಯವಾಗಿ ಎಲ್ಲೆಡೆ ಯಕ್ಷಗಾನ ಕಲೆಯೆಂದೆ ಜನ ಮೆಚ್ಚುಗೆ ಪಡೆಯಿತು.
ಯಕ್ಷಗಾನದಲ್ಲಿ ತಿಳಿಯಲು ಮತ್ತು ಕಲಿಯಲು ಅನೇಕ ಅಂಶಗಳಿದ್ದು ಈ ಕಲೆಯ ಆಸಕ್ತಿ ಮತ್ತು ಅಭಿಮಾನ ಇದ್ದವರಿಗೇ ಎಷ್ಟು ಕಲಿತರು ಇನ್ನಷ್ಟು ಮಗದಷ್ಟು ಕಲಿಯಬೇಕು, ಹೊಸ ಪ್ರಯತ್ನದಲ್ಲಿ ತಲ್ಲೀನರಾಗಬೇಕೆಂಬ ಮನೋಭಾವ ಮೂಡುವುದು ಸಹಜ.

Yakshagana Genres – ಯಕ್ಷಗಾನ ಪ್ರಕಾರಗಳು

ಯಾವುದೇ ಶಿಕ್ಷಣವಿದ್ದರೂ ಅದಕ್ಕೆ ಒಂದು ನಿರ್ದಿಷ್ಟ ಕಲಿಕೆಯ ಪ್ರಕಾರಗಳಿರುವುದು ಕಾಣುತ್ತೇವೆ. ಹಾಗೆಂದು ಯಕ್ಷಗಾನ ನಾಲ್ಕು ಗೋಡೆಯ ಚೌಕಟ್ಟಿಗೆ ಸೀಮಿತವಲ್ಲ. ಬದಲಾಗಿ ಅದೊಂದು ಮುಕ್ತ ಕಲಿಕೆ. ಹೊಸ ಪ್ರಯೋಗಗಳ ಆಗರ. ಯಕ್ಷರಂಗದಲ್ಲಿ ಓರ್ವ ಸಾರ್ವತ್ರಿಕ ಶಿಕ್ಷಣ ಹೀನನು ಚೆನ್ನಾಗಿ ವ್ಯಾಖ್ಯಾನ ಹೇಳಬಲ್ಲ, ಭಾಗವತಿಕೆ ಮಾಡಬಲ್ಲವನಾಗಿ ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಳ್ಳುತ್ತಾನೆ.
ಅದರಂತೆ ಇಂದು ಉತ್ತಮ ವ್ಯಾಸಾಂಗ ಮಾಡಿದವರು ಉನ್ನತ ಉದ್ಯೋಗದಲ್ಲಿರುವವರು ವೇಷ ತೊಟ್ಟು ಸವ್ಯಸಾಚಿಯಾಗಿ ಇರುವವರು ಇದ್ದಾರೆ.
ಅಂತವರಿಗೆ ಇದೊಂದು ಫ್ಯಾಷನ್ ಮತ್ತು ಅಭಿಮಾನವೆಂಬ ಭಾವವಿದೆ. ಅದೇನೆ ಇದ್ದರೂ ಕೂಡ ಯಕ್ಷರಂಗ ಸ್ಥಳ ವೈಸಿಷ್ಟ್ಯತೆಯಿಂದ ಕೂಡಿದೆ.ಈ ನಿಟ್ಟಿನಲ್ಲಿ ಯಕ್ಷಗಾನವನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ತೆಂಕುತಿಟ್ಟು ಮತ್ತು ಬಡಗು ತಿಟ್ಟು ಎಂಬ ಎರಡು ಪ್ರಕಾರಗಳು ಪ್ರಾದೇಶಿಕ ಭಿನ್ನತೆ ಹೊಂದಿದೆ.
ಕಾಸರಗೋಡು, ಮಂಗಳೂರು, ಬೆಳ್ತಂಗಡಿ, ಪುತ್ತೂರು, ಸುಳ್ಯ ಮುಂತಾದೆಡೆ ತೆಂಕುತಿಟ್ಟು ಪ್ರಕಾರ ಹೆಚ್ಚು ಪ್ರಚಲಿತವಾಗಿದೆ. ಉಡುಪಿ, ಕುಂದಾಪುರ, ಶಿವಮೊಗ್ಗ, ಕಾರ್ಕಳ, ಬೈಂದೂರು, ಭಟ್ಕಳ ಮುಂತಾದೆಡೆ ಬಡಗುತಿಟ್ಟು ಯಕ್ಷಗಾನ ಚಿರಪರಿಚಿತ.
ಇವೆರಡೂ ಭಿನ್ನ ವಾಗಿರಲು ಮುಖ್ಯಕಾರಣ ತುಳು ಮತ್ತು ಕನ್ನಡ ಜನಾಂಗವಾಗಿ ಬೇರ್ಪಟ್ಟ ಅಂಶವಿರಬಹುದು. ಇಲ್ಲಿ ತುಳುನಾಡ ಪ್ರದೇಶಗಳೆಲ್ಲ ತುಳು, ಅರೆಭಾಷೆಗಳು ತೆಂಕು ತಿಟ್ಟಿಗೆ ಮತ್ತು ಕನ್ನಡ, ಮಿಶ್ರ ಕನ್ನಡ, ಕುಂದಗನ್ನಡ, ಉತ್ತರ ಕನ್ನಡ, ಬೆಂಗಳೂರು ಮತ್ತು ಇತರ ಕನ್ನಡಮಾತನಾಡುವ ಜನಾಂಗ ಬಡಕುತಿಟ್ಟಿಗೆ ಮಾನ್ಯವಾಯಿತು.
ಈ ಎರಡೂ ತಿಟ್ಟಿನಲ್ಲಿ ಭಾಗವತಿಕೆ ಸ್ವಲ್ಪ ಭಿನ್ನವಾಗಿರುತ್ತದೆ. ಅದರ ಜೊತೆ ವೇಷ ಭೂಷಣ ಕುಣಿತ ಸಂಪೂರ್ಣ ಭಿನ್ನವಾಗಿದ್ದು ಈ ಎರಡೂ ಪ್ರಕಾರಗಳು ಯಕ್ಷ ಕಲೆಯ ಸೊಬಗನ್ನು ಕಲಾ ರಸಿಕರಿಗೆ ಉಣಬಡಿಸುತ್ತಲೇ ಇದೆ.

Art of Coastal Karnataka

ಹಿಂದೆಲ್ಲ ಟಿ.ವಿ., ಮೊಬೈಲ್ ಇಲ್ಲದ ಕಾಲ ಆಗ ಜನರಿಗೆ ಒಂದು ಮನೋರಂಜನೆಯ ಭಾಗವಾಗಿ ಇದನ್ನು ಪ್ರದರ್ಶಿಸಲಾಗುತ್ತಿತ್ತು. ಊರ ಹಬ್ಬ ಹರಿದಿನಗಳಲ್ಲಿ ಜನಜಂಗುಳಿ ರಾತ್ರಿ ಬೆಳಗಾಗುವವರೆಗೂ ಕಣ್ಣು ಮಿಟುಕಿಸದಂತೆ ಯಕ್ಷಗಾನದಲ್ಲಿ ತಲ್ಲೀನರಾಗುತ್ತಿದ್ದರು.
ಹಿಂದೆ ರಾತ್ರಿಯಿಂದ ಬೆಳಗಿನವರೆಗೆ ಯಕ್ಷಗಾನ ನಡೆಯುವ ವಾಡಿಕೆ ಇತ್ತು ಅದರಲ್ಲಿಯೂ ಶಿವರಾತ್ರಿ ಜಾಗರಣೆ ಮಾಡುವಂತಹ ಸಂದರ್ಭದಲ್ಲಿ ಯಕ್ಷಗಾನ ಬಯಲಾಟ ನಡೆಯುತ್ತಿದ್ದು ಜಾಗರಣೆ ಇಷ್ಟಪಡದವರು ಶಿವರಾತ್ರಿ ರಾತ್ರಿ ಎದ್ದಿರಬೇಕೆಂದು ಬಯಸುವವರಿಗಾಗಿ ಯಕ್ಷಗಾನ ಯಾವಾಗಲೂ ಇರುತ್ತಿತ್ತು. ಕೆಲವರು ಹರಕೆಯಾಟ (ಇಷ್ಟಾರ್ಥ ಈಡೇರಲು ದೇವರಲ್ಲಿ ಯಕ್ಷಗಾನ ಆಟ ಆಡಿಸುತ್ತೇವೆ ಎಂದು ಹರಕೆ ಹೊರುವುದು) ಹೇಳಿಕೊಳ್ಳುತ್ತಾರೆ.
ಅಂತಹ ಯಕ್ಷಗಾನಕ್ಕೆ ಯಾವುದೇ ಟಿಕೆಟ್ ಹಣವಿರುವುದಿಲ್ಲ. ಹರಕೆಯಾಟದಲ್ಲಿ ಕ್ಷೇತ್ರ ಮಹಾತ್ಮೆಯನ್ನು ಸಾರುವ ಅಂಸಗಳೇ ಅಧಿಕವಾಗಿರುತ್ತದೆ. ಮಂದಾರ್ತಿ ಮೇಳ, ಕಟೀಲು ದುರ್ಗಾಪರಮೇಶ್ವರೀ ಮೇಳ, ಮಾರಣ ಕಟ್ಟೆ ಇನ್ನೂ ಅನೇಕ ಮೇಳಗಳು ಒಂದು ಪೌರಾಣಿಕ ಕಥೆಯಾದಾರಿತ ಕ್ಷೇತ್ರದ ಮಹತ್ಮೆಯನ್ನು ಜನರಿಗೆ ಯಕ್ಷಗಾನದ ಮೂಲಕ ತಿಳಿಸುತ್ತದೆ.
ಇಂತಹ ಮೇಳಗಳು ಒಂದು ವರ್ಷಕ್ಕೆಲ್ಲ ಬುಕ್ಕಿಂಗ್ ಆಗುತ್ತಿದ್ದು ಇದರಿಂದಾಗಿ ಹರಕೆಯಾಟದ ಪ್ರಮಾಣ ಮತ್ತು ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ನಾವು ಅರ್ಥೈಸಬೇಕಿದೆ.
yakshagana-in-kannada
ಹರಕೆಯಾಟ ಹೇಳಿಕೊಂಡವರು ಮಧ್ಯಾಹ್ನ ಸಾರ್ವಜನೀಕ ಅನ್ನಸಂತರ್ಪಣೆಯೂ ಮಾಡಿಸುತ್ತಾರೆ. ಅದರಲ್ಲಿ ಜನರ ಮಿತಿಯಿಲ್ಲ. ಆಮಂತ್ರಣ ವಿಲ್ಲದ ದಾರಿ ಹೋಕ ಬಂದು ಊಟಮಾಡಿದರೂ ಸಂತೋಷದಿಂದ ಉಣಬಡಿಸಬೇಕು ಮತ್ತು ಅನ್ನಸಂತರ್ಪಣೆ ಎಲ್ಲಿಯೂ ಕಡಿಮೆ ಯಾಗಬಾರದು ಎಂಬ ಶಿಸ್ತಿನ ಆಚರಣೆ ಹರಕೆಯಾಟದಲ್ಲಿ ಪಾಲನೆಯಾಗುತ್ತದೆ.
ಅದರ ಹೊರತಾಗಿ ಕಲಾಕ್ಷೇತ್ರದಲ್ಲಿ, ದೊಡ್ಡ ಆಡಿಟೋರಿಯಂನಲ್ಲಿ ಮತ್ತು ಟೆಂಟ್ ಮಾದರಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು ಕಾಲಮಿತಿ ಇರುತ್ತದೆ ಜೊತೆಗೆ ಟಿಕೆಟ್ ಕೂಡ ಇರುತ್ತದೆ. ಇಗೆಲ್ಲ ಈಡೀ ದಿನ ಯಕ್ಷಗಾನ ನಡೆಯುವುದು ಇದೆ.

Popular Yakshagana Fairs – ಪ್ರಸಿದ್ಧ ಮೇಳಗಳು

ಮೇಳಗಳಿಲ್ಲದೆ ಯಕ್ಷಗಾನ ಗುರುತಿಸುವುದು ಅಸಾಧ್ಯ. ಮನುಷ್ಯರಿಗೆ ಹೆಸರು ಎನ್ನುವುದು ಎಷ್ಟು ಪ್ರಾಮುಖ್ಯತೆ ಪಡೆದಿದೆಯೋ ಅದರಂತೆ ಯಕ್ಷಗಾನವೆನ್ನುವುದು ಅದರ ವೇಷ, ಭಾಗವತಿಕೆ, ಚಂಡೆವಾದನ, ಕುಣಿತ ಎಲ್ಲವೂ ಗುರುತಿಸಲು ಒಂದು ನಿರ್ದಿಷ್ಟ ಮೇಳ ಅಗತ್ಯ.
ಯಕ್ಷಗಾನ ಕಲೆಯ ಮೆರುಗನ್ನು ಊರಿಂದೂರಿಗೆ ಪ್ರದರ್ಶಿಸುವ ತಂಡಗಳಿಗೆ ಮೇಳಗಳೆಂದು ಕರೆಯುತ್ತಾರೆ.
ಈ ಮೇಳಗಳಲ್ಲಿ ಭಾಗವತರು, ಚಂಡೆವಾದಕರು, ವೇಷಧಾರಿಗಳು, ವೇದಿಕೆ ಸಿದ್ಧಪಡಿಸುವವರು, ವೇಷ ಭೂಷಣವನ್ನು ಅಲಂಕರಿಸುವವರೆಲ್ಲ ಒಟ್ಟಾಗಿ ಸೇರಿ ಸುಮಾರು 45ರಿಂದ 50ಜನರ ಒಂದು ತಂಡ ಮೇಳವಾಗಿ ಸಿದ್ಧಗೊಳ್ಳುತ್ತದೆ.
ಹರಕೆ ಮತ್ತು ಸೇವೆ ಆಟದಲ್ಲಿ ಟೆಂಟ್ ಕಟ್ಟಿ ಯಕ್ಷಗಾನ ಪ್ರದರ್ಶನಗೊಳ್ಳುತ್ತದೆ ಹಾಗೂ ಕಲಾಕ್ಷೇತ್ರಗಳಲ್ಲಿ‌ ಟಿಕೆಟ್ ಮಾದರಿ ಯಕ್ಷಪ್ರದರ್ಶನಕ್ಕೂ ಬೇಡಿಕೆ ಇದೆ. ಬೆಂಕಿನಾಥೇಶ್ವರ, ಕಮಲಶಿಲೆ, ಸೌಕೂರು ದುರ್ಗಾಪರಮೇಶ್ವರಿ, ಕಟೀಲು, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಧರ್ಮಸ್ಥಳ ಮಂಜುನಾಥೇಶ್ವರ, ಮಂಗಳಾದೇವಿ, ಮಂದಾರ್ತಿ, ಹಟ್ಟಿಯಂಗಡಿ, ಕೋಟ ಅಮೃತೇಶ್ವರಿ, ಹಿರಿಯಡಕ, ಬಪ್ಪನಾಡು, ಸಸಿಹಿತ್ಲು, ಸಾಲಿಗ್ರಾಮ, ಸುಂಕದಕಟ್ಟೆ, ಪೆರ್ಡೂರು ಇನ್ನೂ ಹಲವು ಮೇಳಗಳು ಪ್ರಸಿದ್ಧಿ ಪಡೆದಿದೆ.
dance-of-karnataka-yakshagana
ಭಾಗವತಿಕೆ ಮತ್ತು ಭಾಗವತರು
ಭಾಗವತಿಕೆ ಎನ್ನುವುದು ಯಕ್ಷಗಾನ ಕಲೆಯ ಜೀವಾಳ ವಿದ್ಧಂತೆ ಇಲ್ಲಿ ವೇಷ ತೊಟ್ಟು ಕಲಾವಿದರು ಬಂದರೆ ಅವರು ಆ ಪ್ರಸಂಗದಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ, ಯಾರವರು ಮುಂತಾದವುಗಳನ್ನು ತಿಳಿಸುವವರೇ ಭಾಗವತರು.
ಅವರ ಧ್ವನಿ ದೊಡ್ಡದಾಗಿದ್ದು ಸಂದರ್ಭಾನುಸಾರ ಧ್ವನಿ ಜೊಡಣೆ ಮಾಡುವ ಚಾಕಚಕ್ಯತೆ ಭಾಗವತರಿಗೆ ಇರುತ್ತದೆ. ಒಂದು ರೀತಿಯಲ್ಲಿ ಇವರು ಯಕ್ಷಗಾನ ಪ್ರಸಂಗದ ನಿರ್ದೇಶಕರಿದ್ದಂತೆ. ಪಾತ್ರಧಾರಿಗಳು ಇವರ ಕಾವ್ಯಾತ್ಮಕ ಹಾಡುಗಾರಿಕೆಗೆ ತಕ್ಕಂತೆ ಹೆಜ್ಜೆ ಇಟ್ಟು ಕುಣಿಯುತ್ತಾರೆ.
ಭಾಗವತರು ಹಾಡುವ ಯಕ್ಷಗಾನದ ಪದ ಮತ್ತು ಅಲ್ಲಲ್ಲಿ ಹೇಳುವ ವಿವರಣೆ ಎಲ್ಲ ಒಟ್ಟಗಿ ಸೇರಿ ಭಾಗವತಿಕೆ ಎನ್ನುತ್ತಾರೆ.ಆದರೆ ಈ ಭಾಗವತಿಕೆ ಕೇವಲ ಭಾಗವತರು ಮಾತ್ರ ಸೇರ್ಪಡೆಯಾಗದೇ ಚಂಡೆ ಮದ್ದಳೆ ವಾದಕರನ್ನು ಒಟ್ಟಾಗಿ ಸೇರಿ ವೀಕ್ಷಕರು ಭಾಗವತಿಕೆಯ ಕುರಿತು ತಮ್ಮ ಅಭಿಪ್ರಾಯ ವಿನಿಯೋಗಿಸುತ್ತಾರೆ.
ಓರ್ವ ಭಾಗವತನಿಗೆ ನವಿರು ಹಾಸ್ಯ ಪ್ರಜ್ಞಯ ಅತೀ ಅಗತ್ಯವಾಗಿದೆ. ಅಂದರೆ ವೇಷಧಾರಿಗಳು ಸಂದರ್ಭಾನುಸಾರ ಮಾತು ಆರಂಭಿಸಿ ಅಲ್ಲೆನೊ ಅಚಾತುರ್ಯ ನಡೆದರೆ ಅದನ್ನು ಸರಿಮಾಡುವ ಚುರುಕುತನ ಆತನಿಗಿರಬೇಕು.
ಅದರಲ್ಲೂ ಹಾಸ್ಯಗಾರ ಪಾತ್ರಧಾರಿ ಎಲ್ಲರ ಕಾಲೆಳೆಯುತ್ತಲೇ ನಕ್ಕು ನಗಿಸುತ್ತಾನೆ. ಅವನ ಪ್ರಯತ್ನಕ್ಕೆ ಬೆಂಗಾವಲಾಗಿ ಭಾಗವತರು ಎಲ್ಲ ಎಕ್ಷಗಾನದಲ್ಲಿ ಇದ್ದೇ ಇರುತ್ತಾರೆ.

Famous Yakshagana Bhagavataru ಪ್ರಸಿದ್ಧ ಭಾಗವತರು

ಪಾರ್ತಿ ಸುಬ್ಬ, ಕಾಳಿಂಗ ನಾವಡ, ಮರವಂತೆ ನರಸಿಂಹ ದಾಸ, ದೇವರಾಜ ದಾಸ್, ವಿದ್ವಾನ್ ಗಣಪತಿ ಭಟ್, ವಿಷ್ಣು ಮರಾಠೆ, ಸುಬ್ರಹ್ಮಣ್ಯ ಧಾರೇಶ್ವರ, ವಿಷ್ಣು ಮರಾಠೆ, ಸತೀಶ್ ಪಟ್ಲ, ಕೆ ಪಿ ಹೆಗಡೆ,ಸುರೇಶ್ ಶೆಟ್ಟಿ, ಗೋಪಲ ಕೃಷ್ಣ, ದೇವಿ ಪ್ರಸಾದ್ ಶೆಟ್ಟಿ ಇನ್ನೂ ಅನೇಕರು ತಮ್ಮ ಭಾಗವತಿಕೆಯಿಂದ ಪ್ರಸಿದ್ಧಿ ಪಡೆದಿದ್ದಾರೆ. ಯಕ್ಷಗಾನದಲ್ಲಿ ಅತ್ಯಂತ ಶ್ರೇಷ್ಠ ಸಾಧನೆ ಮಾಡಿದ ಪಾರ್ತಿ ಸುಬ್ಬ ಮತ್ತು ಕಾಳಿಂಗ ನಾವಡರ ಹೆಸರಿನಲ್ಲಿ ಯಕ್ಷಗಾನ ಕಲಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Yakshagana Costumes ವೇಷಭೂಷಣ

ರಾಜ ವೇಶ, ಪುಂಡ ವೇಶ, ದೇವತೆ ವೇಶ, ಹಾಸ್ಯಗಾರ ವೇಶ, ರಕ್ಕಸ ವೇಶ, ಸ್ತ್ರಿ ವೇಷ ಹೀಗೆ ಒಂದೊಂದು ವೇಷಕ್ಕೂ ಒಂದೊಂದು ಪ್ರತೀತಿ ಇರುತ್ತದೆ ಸಾಮಾನ್ಯವಾಗಿ ವರಟು ಧ್ವನಿ, ದಪ್ಪ ದೇಹ ವಿರುವವರಿಗೆ ರಕ್ಷಸ ವೇಶ, ನೋಡಲು ಸಣ್ಣಗೆ ಕುಳ್ಳಗೆ ಇರುವವರಿಗೆ ಹಾಸ್ಯ ವೇಶ ಹೀಗೆ ವ್ಯಕ್ತಿಯ ದೇಹಚರ್ಯೆ ಮತ್ತು ವಾಕ್ ಚಾತುರ್ಯಕ್ಕೆ ಅನುಗುಣವಾಗಿ ಪ್ರಸಂಗದಲ್ಲಿ ವೇಶವನ್ನು ನೀಡಲಾಗುತ್ತದೆ.
ಅಲಂಕಾರಿಕ ವಸ್ತುಗಳು, ಗೆಜ್ಜೆ ಇವುಗಳು ಸಾಮಾನ್ಯವಾಗಿದ್ದು ಪ್ರತೀ ವೇಷಕ್ಕೂ ಒಂದೊಂದು ಕಿರೀಟವಿರುತ್ತದೆ ಅದರಂತೆ ಹಾಸ್ಯ, ಬ್ರಾಹ್ಮಣ ಮುಂತಾದ ವೇಷಕ್ಕೆ ಕಿರೀಟ ವಿರಲಾರದು. ಈ ವೇಷಗಳಲ್ಲಿ ಮೇಳದಿಂದ ಮೇಳಕ್ಕೆವಿಭಿನ್ಮತೆ ಇರುವುದನ್ನು ಕಾಣಬಹುದು.

Singing and rhetoric ಹಾಡುಗಾರಿಕೆ ಮತ್ತು ಮಾತುಗಾರಿಕೆ

ಯಕ್ಷಗಾನ ಈ ಎರಡು ಅಂಶಗಳಲ್ಲಿಯೂ ಗುರುತಿಸಿಕೊಂಡಿದ್ದು ಭಾಗವತರು ಸಂದೇಶ ಮತ್ತು ಸಂದರ್ಭಾನುಸಾರ ಹಾಡಿನ ಪದವನ್ನು ಆರಂಭಿಸಿದಾಗ ವೇಷಧಾರಿಗಳು ಕುಣಿಯುತ್ತ ಅದರ ಸಾರಾಂಶ ಹೇಳ ಹೊರಡುತ್ತಾರೆ ಆ ಬಳಿಕ ಕುಣಿತ ಮುಗಿದು ಪದ್ಯದ ಸಾರಾಂಶವನ್ನು ಮಾತುಗಾರಿಕೆ ಮೂಲಕ ವರ್ಣಿಸುತ್ತಾರೆ. ಸಾಮಾನ್ಯವಾಗಿ ಇಲ್ಲಿ ಗ್ರಾಮ್ಯ ಆಡುಭಾಷೆ ಬಳಕೆಯಾಗುತ್ತಿದ್ದು ಮೇಳದಿಂದ ಮೇಳಕ್ಕೆ ಇವುಗಳು ವ್ಯತ್ಯಾಸದಿಂದ ಕೂಡಿರುತ್ತದೆ.
ಪ್ರಸಿದ್ಧ ಪಾತ್ರಧಾರಿಗಳು
ವೇಷ ತೊಟ್ಟು ಸಂದರ್ಭಾನುಸಾರ ಮತ್ತು ಪಾತ್ರಕ್ಕೆ ಸರಿಯಾಗಿ ಸ್ಥಾನ ಮಾನ ಒದಗಿಸುವವರು ಇವರಾಗಿದ್ದಾರೆ. ಇವರು ಯಕ್ಷಗಾನದ ಆತ್ಮ ವಿದ್ದಂತೆ. ಇವರಿಲ್ಲದೆ ರಂಗ ಮಂದಿರದ ಮೇಲೆ ಯಕ್ಷಗಾನ ಕಳೆ ಹೊಂದಲಾರದು.
ಈ ಕ್ಷೇತ್ರದಲ್ಲಿ ಪ್ರಮುಖ ಸಾಧನೆ ಮಾಡಿದವರ ಪಟ್ಟಿಯಲ್ಲಿ ಶಂಭು ಹೆಗಡೆ, ಮಹಾಬಲ ಹೆಗಡೆ, ಶಿವರಾಮ ಹೆಗಡೆ, ಶಿವಪ್ರಸಾದ್ ಭಟ್, ನಯನ ಕುಮಾರ್, ಪುತ್ತೂರು ಶ್ರೀಧರ ಭಂಡಾರಿ, ನಾರಾಯಣ ಹೆಗಡೆ, ದಿ. ಶೇಣಿ ಗೋಪಾಲಕೃಷ್ಣ ಭಟ್ ಇನ್ನೂ ಅನೇಕರು ಈ ಕ್ಷೇತ್ರದಲ್ಲಿ ಅಪ್ರತಿಮರೆನಿಸಿದ್ದಾರೆ.
ಚೌಕಿ
ಯಕ್ಷಗಾನದಲ್ಲಿ ವೇಷಧರಿಸಲು ಇರುವ ನಿರ್ದಿಷ್ಟ ಸ್ಥಳಕ್ಕೆ ಚೌಕಿ ಎಂದು ಕರೆಯುತ್ತಾರೆ. ಕಿರೀಟ, ಬಣ್ಣಗಳು, ಗೆಜ್ಜೆ, ಸರ, ಸ್ತ್ರೀ ಮತ್ತು ಪುರುಷ ವೇಷದ ವಸ್ತ್ರಗಳನ್ನು ಮುಂತಾದ ಅಲಂಕಾರಿಕ ವಸ್ತುಗಳನ್ನು ಸಹ ಇಲ್ಲಿ ಇರಿಸಲಾಗುತ್ತದೆ. ಕಲಾವಿದರಿಗೆ ವೇಷ ಆರಂಭದ ಮೊದಲು ಸಣ್ಣ ಪೂಜೆಯೊಂದು ಇರುತ್ತದೆ.
ಅದೇ ರೀತಿ ಸಂಪೂರ್ಣ ವೇಷ ಧರಿಸಿದ ಮೇಲೆ ರಂಗ ಪ್ರವೇಶದ ಮೊದಲು ಗಣಪತಿ ಪೂಜೆ ಮಾಡುವುದು ತಲತಲಾಂತರ ವರ್ಷಗಳಿಂದ ಬಂದ ಪದ್ಧತಿಯಾಗಿದೆ. ಯಾವೂದೇ ವಿಘ್ನಗಳು ಬಾರದಿರಲಿ‌‌ ಎಂದು ವಿಘ್ನೇಶ್ವರನನ್ನು ಹಾಗೂ ಗಣಾದಿ ದೇವತೆಯನ್ನು, ದುರ್ಗಾ ದೇವಿ ಇತರ ದೇವರನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ.
ಪ್ರಸಂಗ ಕಲೆ
ಚಲನ ಚಿತ್ರಗಳಲ್ಲಿ ಕತೆ ಯಾವರೀತಿ ಪಾತ್ರ ನಿರ್ವಹಿಸುತ್ತದೆಯೋ ಅದೆ ತರನಾಗಿ ಪ್ರಸಂಗ ಎನ್ನುವುದು ಒಂದು ನಿರ್ದಿಷ್ಟವಿಧವಾದ ಕತೆಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುವ ಅಂಶವನ್ನು ಒಳಗೊಂಡಿದೆ. ಅಂದರೆ ಪೌರಾಣಿಕ ದೈವ ದೇವರುಗಳ ಕತೆಯಿಂದ ಆಧುನಿಕ ಸಿನೆಮಾ ಕತೆಯ ವರೆಗೂ ಯಕ್ಷಗಾನ ಹಿನ್ನೆಲೆ ಮೂಲಕ ಪ್ರೇಕ್ಷಕರ ಮನ ಹೊಕ್ಕುವ ಒಂದು ವಿಧಾನ.
ಸಂಪೂರ್ಣ ಯಕ್ಷಗಾನ ವೀಕ್ಷಿಸಿದ ಬಳಿಕ ಓರ್ವ ವ್ಯಕ್ತಿಗೆ ಕತೆ ಅರ್ಥವಾಗಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ ಎಂದರೆ ಬಹುತೇಕ ಆ ಪ್ರಸಂಗ ಹೆಚ್ಚು ಯಶಸ್ಸು ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನಳ ಮಹಾರಾಜ, ಸಂಪೂರ್ಣ ದೇವಿ ಮಹಾತ್ಮೆ, ಭಕ್ತ ಮಾರ್ಕಂಡೇಯ, ಭಕ್ತ ಪ್ರಹ್ಲಾದ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಭೀಷ್ಮ ವಿಜಯ, ಭೀಷ್ಮ ಸಂದ, ಸತ್ಯಹರಿಶ್ಚಂದ್ರ, ಶ್ವೇತ ಕುಮಾರ ಚರಿತೆ, ರಾಜ ವಿಕ್ರಮಾದಿತ್ಯ, ಕುಮಾರ ವಿಜಯ, ಕೃಷ್ಣ ಸಂದಾನ, ಸೀತಾ ಪರಿತ್ಯಾಗ, ಚಂದ್ರಹಾಸ, ಕವಿರತ್ನ ಕಾಳಿದಾಸ ಇನ್ನೂ ಅನೇಕ ಪ್ರಸಂಗಗಳ ಪಟ್ಟಿಯೆ ಇವೆ.
ಅವುಗಳು ಒಂದು ನಿರ್ದಿಷ್ಟ ವಿಷಯದ ಕುರಿತು ಕತೆ ಹೆಣೆಯಲ್ಪಟ್ಟು ಆ ಕತೆಯನ್ನು ವೀಕ್ಷಕರ ಮುಂದೆ ಪ್ರಸ್ತುತ ಪಡಿಅಉತ್ತಲೇ ಇದೆ. ಕತೆ ಹಳೆಯದಾಗಿರಬಹುದು ಆದರೆ ಅದಕ್ಕಿರುವ ಮಾನ್ಯತೆ ಇಂದಿಗೂ ತಗ್ಗಿಲ್ಲ. ಇಂತಹ ಪ್ರಸಂಗಗಳಿಗೆ ಅಪಾರ ಸಂಖ್ಯೆ ವೀಕ್ಷಕರು ಈಗಲೂ ಇದ್ದಾರೆ.

Yakshagana Art ವಾದ್ಯ ಹಿನ್ನೆಲೆ

ತಾಳ ಮದ್ದಳೆಯೂ ಒಂದು ರೀತಿಯಲ್ಲಿ ಯಕ್ಷಗಾನವನ್ನು ಪ್ರಸ್ತುತ ಪಡಿಸುವ ಸಂಗೀತದ ಹಿನ್ನೆಲೆ ಇದ್ದಂತೆ. ಯಕ್ಷಗಾನ ಪ್ರಸಂಗದಲ್ಲಿ ಭಾಗವತರು ಪದ ಹಾಡುವಾಗ ಹಿನ್ನೆಲೆ ಅತೀ ಅಗತ್ಯ ಇಲ್ಲದಿದ್ದರೆ ಪ್ರೇಕ್ಷಕ ದೊರೆಗೆ ಯಕ್ಷಗಾನದ ಸೊಬಗಿನ ಔತಣವು ಉಪ್ಪಿಲ್ಲದ ಸಪ್ಪೆ ಊಟದಂತಾಗುತ್ತದೆ. ಹಾಗಿದ್ದರೂ ಬರೀ ತಾಳೆ ಮದ್ದಳೆ ಚಂಡೆ ನಾದದಿಂದ ಯಕ್ಷಗಾನ ಅರ್ಥಗರ್ಭಿತ ವಾಗಲಾರದು.
ಪಾತ್ರಧಾರಿಗಳು ರಂಗದ ಮೇಲಿದ್ದಾಗ ಅವರ ಮಾತಿನ ಹೊಡೆತಕ್ಕೆ ಮತ್ತು ಭಾಗವತರ ಪದದ ತಳಕ್ಕೆ ತಕ್ಕನಾಗಿ ಹೆಜ್ಜೆಇಡಬೇಕಾದಾಗ ತಾಳೆ ಮದ್ದಳೆ ಬಹಳ ಅಗತ್ಯವಿದೆ. ಇನ್ನೊಂದು ಅರ್ಥದಲ್ಲಿ ತಾಳ ಮದ್ದಳೆಯೂ ಯಕ್ಷಗಾನದ ಪ್ರಕಾರಗಳಲ್ಲಿ ಒಂದಂಶಕ್ಕೆ ಸೇರಿರುತ್ತದೆ.
ಹೆಚ್ಚಾಗಿ ಮಳೆಗಾಲದಲ್ಲಿ ಟೆಂಟ್ ನಿರ್ಮಿಸಲು ಕಷ್ಟವಾಗುವಂತದ್ದು ಇತರೆ ಸಮಸ್ಯೆ ಹಿನ್ನೆಲೆ ತಾಳ ಮದ್ದಳೆ ಪ್ರಕಾರ ಹೆಚ್ಚು ಚಾಲ್ತಿಗೆ ಬರುತ್ತದೆ.ಈ ಪ್ರಕಾರದಲ್ಲಿ ವೇಷ ಭೂಷಣ ಕುಣಿತ ವಿರಲಾರದು ಮಾತುಗಾರಿಕೆ ಪದದ ಸ್ವಾರಸ್ಯಕರ ಅರ್ಥ ವಿವರಣೆ ಇರುತ್ತದೆ. ಇದಕ್ಕೂ ಸಾಕಷ್ಟು ಅಭಿಮಾನಿಗಳಿದ್ದಾರೆ.

Famous Yakshagana Personalities ತಾಳ ಮದ್ದಳೆ ವಾದದ ಹೆಸರಾಂತರು

ಮಟ್ಟಿ ಸುಬ್ಬರಾಯರು, ಪ್ರಖ್ಯಾತ ಅರ್ಥಶಾಸ್ತ್ರಜ್ಞ ಪ್ರಭಾಕರ ಶಿಶಿಲ, ದೇರಾಜೆ ಸೀತಾರಾಮಯ್ಯ, ಮಲ್ಪೆ ಲಕ್ಷ್ಮೀ ನಾರಾಯಣ ಸಾಮಗ, ಚೆನ್ನಪ್ಪ ಶೆಟ್ಟಿ, ಅಶೋಕ್ ರಾಮ್ ಮೊದಲಾದವರು ತಾಳ ಮದ್ದಳೆಯ ಪ್ರಕಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Ancient History of Yakshagana ಯಕ್ಷಗಾನದ ವೈಭವ ಇತಿಹಾಸ

ಈಗಾಗಲೇ ತಿಳಿಸಿದಂತೆ ಇದೊಂದು ಜನಪದ ಕಲೆಯೂ ಹೌದು, ಜನರ ಮನೋರಂಜನೆಯ ಭಾಗವೂ ಹೌದು. ಯಕ್ಷಗಾನ ಹುಟ್ಟಿಕೊಂಡದ್ದು ಯಾವಾಗ ಎಂದು ನಿರ್ದಿಷ್ಟ ಅಂಕಿ ಅಂಶಗಳು ಸಿಗಲಾರದು. ಹಾಗಿದ್ದರೂ ಕೆಲವೂ ಉಲ್ಲೇಖದ ಪ್ರಕಾರ 1500 ವರ್ಷದ ಹಿಂದೆ ಎಂಬ ಅಂಶ ತಿಳಿದು ಬರುತ್ತದೆ. ಕ್ರಿ. ಶ. 1200 ರ ಕಾಲಮಾನದಲ್ಲಿ ಸ್ವರ್ಣದೇವನ ಸಂಗೀತ ರತ್ನಾಕರ ಎಂಬ ಭಾಗದಲ್ಲಿ ಮೊದಲು ಯಕ್ಕಲವೆಂದು ಅನಂತರ ಗಂಧರ್ವ ಗಾನವೆಂದು ಯಕ್ಷಗಾನವಾಗಿ ಜನಮಾನ್ಯತೆ ಪಡೆದಿದೆ ಎಂದು ತಿಳಿಸಲಾಗಿದೆ‌.
ಕಾಸರಗೋಡಿನ ಕುಂಬ್ಳೆ ಮೂಲದ ಪಾರ್ತಿ ಸುಬ್ಬ ಅವರು ಯಕ್ಷಗಾನ ಕಲೆಯನ್ನು ಸಾಕಷ್ಟು ಸುಧಾರಿಸಿ ಅಭಿವೃದ್ಧಿ ಪಡಿಸಿದ ಹಿನ್ನೆಲೆ ಅವರನ್ನು ಯಕ್ಷಗಾನದ ಪಿತಾಮಹ ನೆಂದು ಕರೆಯುತ್ತದೆ. ಅವರ ಕಾಲದಲ್ಲಿ ರಾಮಾಯಣ ಮಹಾಭಾರತ ಹೆಚ್ಚು ಪ್ರಚಲಿತದಲ್ಲಿತ್ತು.
ರಾಮಾಯಣ ಪ್ರಸಂಗವನ್ನು ಇವರು ಬಹಳಷ್ಟು ಸುಧಾರಿಸಿದ್ದರಂತೆ ಹೊಸ ವೇಷಭೂಷಣ, ಯಕ್ಷಗಾನಕ್ಕೆ ಕಾವ್ಯಾತ್ಮಕ ಹಿನ್ನೆಲೆ ಒದಗಿಸಿದವರೂ ಇವರೇ ಆಗಿದ್ದಾರೆ. ಶಿವರಾಮ ಕಾರಂತರ ಯಕ್ಷಗಾನ ಸಂಶೋಧನೆ ಕೃತಿ ಯಕ್ಷಗಾನ ಬಯಲಾಟದಲ್ಲಜ ಉಲ್ಲೇಖಿಸಿದಂತೆ ಯಕ್ಷಗಾನ ಕಲೆ ಮೊದಲು ಹುಟ್ಟಿಕೊಂಡದ್ದು ಕ್ರಿಸ್ತ ಶಕ 1200ರ ಕಾಲವೆಂದು ಅಂದಾಜಿಸಲಾಗಿದ್ದು ಅದು ಗಂಧರ್ವ ಗಾನವೆಂದು ಮತ್ತು ಜನಪದ ಕಲೆಎಂದು ತಿಳಿಸಲಾಗಿದೆ.ಹಾಗಿದ್ದರೂ ಯಕ್ಷಗಾನ ಜನಮಾನ್ಯತೆ ಪಡೆದಿದ್ದು ಕ್ರಿ.ಶ. 1600 ರ ಕಾಲಮಾನದಲ್ಲಿ.
ಕಲೆಯ ಬೇಧವಿಲ್ಲ
ಯಕ್ಷಗಾನದಲ್ಲಿ ಪುರುಷರಷ್ಟೇ ಮಹಿಳೆಯರು ಸಾಧನೆ ಮಾಡಿದವರು ಇದ್ದಾರೆ.
ಕಲೆಯ ಕಲಿಕೆ ಉಪಯೋಗವೇನು ಬಹುತೇಕರಲ್ಲಿ ಯಕ್ಷಗಾನ ಕಲೆ ಶಾಲಾ ವಿದ್ಯೆ ಕಡಿಮೆ ಇರುವವರು ಮಾಡುವ ವೃತ್ತಿ ಎಂಬ ಭಾವವಿದೆ. ಆದರೆ ಇಂದು ಕಲಿತವರೆ ವೇಷ ತೊಡಲು ಹಂಬಲಿಸುವಾಗ ಅದೊಂದು ವೃತ್ತಿಯಾಗಿದ್ದಕಿಂತಲೂ ಕಲೆಯ ಆಗರವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬಹುತೇಕ ಎಲ್ಲಾ ಶಾಲಾ ಕಾಲೇಜಿನಲ್ಲಿ ಯಕ್ಷಗಾನ ಕಲಿಕೆಯ ತರಗತಿ ಇರುತ್ತದೆ.
ಕೆಲವತು ಶುಲ್ಕ ಪಡೆದರೆ ಇನ್ನೂ ಕೆಲವರು ಕಲೆಯ ಜೀವಂತಿಕೆ ಉಳಿಸುವ ಸಲುವಾಗಿ ಉಚಿತವಾಗಿ ಕಲಿಸುತ್ತಾರೆ. ಇದನ್ನು ಸಣ್ಣ ವಯಸ್ಸಿನ ಅಥವಾ ವಿದ್ಯಾಭ್ಯಾಸ ನಿರತ ಮಕ್ಕಳು ಕಲಿಯುವುದು ತುಂಬಾ ಅನುಕೂಲಗಳಿವೆ. ಯಕ್ಷಗಾನವನ್ನು ಎಳೆ ವಯಸ್ಸಿನಲ್ಲಿ ಕಲಿಯುವುದರಿಂದ ಮಕ್ಕಳ ಬುದ್ಧಿ ಶಕ್ತಿ ಹೆಚ್ಚುವುದು ಮಾತ್ರವಲ್ಲದೆ, ವಾಕ್ ಚಾತುರ್ಯ, ಕ್ರಿಯಾಶೀಲತೆಯೂ ಅಧಿಕವಾಗುತ್ತದೆ.

Art of Yakshagana

ಪ್ರಸ್ತುತ ಕಾಲಮಾನ

See also  ಆತ್ಮಹತ್ಯೆಗೆ ಶರಣಾದ ಮುಂಬೈನ ಯುವ ಕ್ರಿಕೆಟಿಗ
ಇಂದು ಯಕ್ಷಗಾನದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಯಕ್ಷಗಾನವನ್ನು ಕಲಿಯಬೇಕೆಂಬ ಹಂಬಲ ಉಳ್ಳವರ ಸಂಖ್ಯೆಯೂ ಹೆಚ್ಚಾಗಿದೆ.
ಇಂದಿನ ಯಕ್ಷಗಾನದಲ್ಲಿ ಹೊಸ ಪ್ರಯೋಗಗಳಿಗೆ ಅಧಿಕ‌ ಮಾನ್ಯತೆ ನೀಡುತ್ತಿದ್ದಾರೆ. ಅದರಂತೆ ಅನುಕರಣಾ ವಿಧಾನವನ್ನು ಸಹ ಅಳವಡಿಸಲಾಗಿದೆ. ಅಂದರೆ ಪ್ರಸಿದ್ಧ ಸಿನೆಮಾಗಳನ್ನು ಯಕ್ಷಗಾನದಲ್ಲಿ ರೂಪಿಸುತ್ತಿದ್ದಾರೆ. ಉದಾ:ಆಪ್ತ ಮಿತ್ರ, ಜರಸಂಧ ಇತ್ಯಾದಿ. ಒಮ್ಮೊಮ್ಮೆ ಇದು ಅಭಿವೃದ್ಧಿ ಅನಿಸಿದರೆ ಮಗದೊಮ್ಮೆ ಯಕ್ಷಗಾನ ತನ್ನ ಸ್ವಂತಿಕೆ ಕಳೆದು ಕೊಳ್ಳುವತ್ತ ಹೊರಟಂತಾಗುತ್ತದೆ.
ಅದೇ ರೀತಿ ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಟ್ರೆಂಡ್ ವರ್ಡ್ ಗಳನ್ನು ಬಳಸಿ ಅಪಹಾಸ್ಯ ಮಾಡುವ ವಿಧಾನವೂ ಅಲ್ಲಲ್ಲಿ ನಡೆಯುತ್ತಿದ್ದು (ಉದಾ: ಮಂಗಳೂರಿನಲ್ಲಿ ಗಾಸಿಪ್ ವಿಷಯವಾದ ತಾಂಟ್ರೇ ಬಾ, ಕುತ್ತಿಮಿರಿ ಸೊಪ್ಪು ಇತರೆ) ಅಂಶಗಳು ಯಕ್ಷಗಾನವನ್ನು ಬಹಳ ಲಘು ಕಲೆ ಎಂಬಂತೆ ಮಾರ್ಪಡಿಸಿದಂತಾಗಿದೆ. ಅದರಂತೆ ಡಬಲ್ ಮೀನಿಂಗ್ ಡೈಲಾಗ್ ಗಳು ಸಹ ಇಲ್ಲಿ ಚಾಲ್ತಿಯಲ್ಲಿದ್ದು ಬಹುತೇಕ ಪ್ರೇಕ್ಷಕರನ್ನು ಸೆಳೆಯುವ ಆತುರದಲ್ಲಿ ಕಲೆಯ ಕೊಲೆಗೇಡಿತನಕ್ಕೆ ಕಾರಣರಾದದ್ದಂತೂ ಸತ್ಯ. ಇದರಲ್ಲಿ ಯಕ್ಷಗಾನ ರಂಗಕರ್ಮಿಗಳ ತಪ್ಪಿಲ್ಲ ಅವರು ಜನರ ಅಭಿವ್ಯಕ್ತಿಗನುಸಾರ ತಮ್ಮ‌ ಮೇಳವನ್ನು ಸಿದ್ಧಗೊಳಿಸುತ್ತಾರೆ. ಹಾಗಾಗಿ ನಮ್ಮ ಅಭಿವ್ಯಕ್ತಿ ವಿಚಾರ ಈ ಕಲೆಯ ಕುರಿತು ಬದಲಾಗುವ ಅನಿವಾರ್ಯ ತೆ ಪ್ರಸ್ತುತ‌ಸಮಾಜಕ್ಕಿದೆ.
ಸರಕಾರದ ನಡೆ
 ಇಂದು ಸರಕಾರ ತನ್ನ ಪ್ರವಾಸೋದ್ಯಮ ಅಭಿವೃದ್ಧಿ ಅಂಶದಲ್ಲಿ ಯಕ್ಷಗಾನದ ಕಲೆಯನ್ನು ಕರ್ನಾಟಕದ ಜನಪದ ಕಲೆಯ ಗುಂಪಿಗೆ ಸೇರಿಸಿರುವುದು ಹೆಮ್ಮೆಯ ವಿಷಯ.
ಅದರಂತೆ ಸರಕಾರವು ಕೆಲವೊಂದು ಜಾಗತಯ ಸಪ್ತಹ, ಜನಜಾಗೃತಿ, ಕಾನೂನು ಅರಿವು, ಸಾಮಾಜಿಕ ಸಂದೇಶ ನೀಡುವ ಸಲುವಾಗಿ ಯಕ್ಷಗಾನ ಕಲೆಯನ್ನು ಬಳಸುತ್ತಿದೆ. ( ಉದಾ- ಏಡ್ಸ್ ಜಾಗೃತಿ, ಜಾಗತಿಕ ಶಿಕ್ಷಣ ವ್ಯವಸ್ಥೆ, ಮಹಿಳಾ ಸಮಾನತೆ ಇತರೆ) ಇದರಿಂದಾಗಿ ಸಮಾಜವು ಸಹ್ಯ ಅಭಿವೃದ್ಧಿಯಾಗುವುದರೊಂದಿಗೆ ಪ್ರಜ್ಞಾವಂತ ನಾಗರೀಕ ಸಮಾಜ ಸೃಷ್ಟಿಯಾಗುತ್ಯದೆ.

Conclusion ಉಪಸಂಹಾರ

ಕರ್ನಾಟಕದ ಹೆಮ್ಮೆಯ ಕಲೆಯ ಪಟ್ಟಿಯಲ್ಲಿ ಯಕ್ಷಗಾನ ಒಂದು. ಈ ಹೆಗ್ಗಳಿಕೆ ಚಿರಕಾಲ ಉಳಿಯ ಬೇಕಾದರೆ ಕಲಾ ಆರಾಧಕರು ಮತ್ತು ಪ್ರೋತ್ಸಾಹಕರ ಸಂಖ್ಯೆ ಹೆಚ್ಚಾಗಬೇಕಿದೆ.
ಇಂದು ದೇಶ ವಿದೇಶ ಮಟ್ಟದಲ್ಲಿ ಎನ್ ಆರ್ ಐಗಳು ಈ ಕಲೆಯ ಉಳಿವಿಗಾಗಿ ಸಾಕಷ್ಟು ದೇಣಿಗೆಯನ್ನು ನೀಡುತ್ತಾ ಕಲಾಸೇವೆಯಲ್ಲಿ ಜನಮಾನ್ಯತೆ ಪಡೆದಿದ್ದಾರೆ.
ಒಟ್ಟರೆಯಾಗಿ ಕಲಾ ಆರಾಧಕರೊಂದಿಗೆ ಯಕ್ಷಗಾನ ಕಲೆಯೂ ಜೀವಂತಿಕೆ ಪಡೆಯುತ್ತಿದ್ದು ಈ ಪಯಣ ನಿರಂತರವಾಗಲಿ‌ ಇನ್ನಷ್ಟು ಯುವ ಸಮುದಾಯಕ್ಕೆ ಇದರ ಸದುಪಯೋಗವಾಗಲಿ ಕಲೆ ಶಾಶ್ವತವಾಗಿ‌ ಉಳಿಯಲಿ.
– ಚಿನ್ಮಯಿ ರಾಧೆ.

LEAVE A REPLY

Please enter your comment!
Please enter your name here