ಕಾರ್ಕಳ: ಡಾಟಾ ಎಂಟ್ರಿ ಜಾಬ್: ಅಜೆಕಾರಿನ ಯುವಕನಿಗೆ ಪಂಗನಾಮ!

0

ಕಾರ್ಕಳ, ಸೆ. 19 : ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಾವಿರಗಟ್ಟಲೆ ಸಂಪಾದಿಸಿ ಎಂದು ಆಕರ್ಷಕವಾಗಿ ಆಮಿಷವೊಡ್ಡುವ ಜಾಹೀರಾತುಗಳನ್ನು ನೀವು ಎಲ್ಲೆಡೆ ನೋಡಿರಬಹುದು. ಆದರೆ ಈ ಎಲ್ಲ ವರ್ಕ್‌ ಫ್ರಂ ಹೋಮ್‌ ಆಫರ್‌ಗಳು ಸಾಚಾ ಆಗಿರುವುದಿಲ್ಲ. ಕೆಲವು ನಯವಾಗಿ ಪಂಗನಾಮ ಹಾಕುವ ವಂಚನಾ ಜಾಲವೂ ಆಗಿರುತ್ತದೆ. ಇಂಥ ಒಂದು ಅನುಭವ ಅಜೆಕಾರಿನ ಯುವಕನಿಗೆ ಆಗಿದೆ.

ಎರಡು ವಾರದ ಹಿಂದೆ ಗೂಗಲ್‌ ನಲ್ಲಿ ಸರ್ಚ್‌ ಮಾಡುವಾಗ ಕ್ವಿಕ್ಕರ್‌ ಜಾಬ್ಸ್‌ ಎಂಬ ಸೈಟಿನಲ್ಲಿ ಡಾಟಾ ಎಂಟ್ರಿ ಜಾಬ್‌ ಗಳು ಉಡುಪಿ, ಮಣಿಪಾಲದಲ್ಲಿವೆ ಅಪ್ಲಾಯ್‌ ಮಾಡಿ ಎಂಬ ಜಾಹೀರಾತು ಇತ್ತು. ಯುವಕ ಇದನ್ನು ನಂಬಿ ಅಪ್ಲಾಯ್‌ ಮಾಡಿದ.

ಕೆಲ ದಿನಗಳ ಬಳಿಕ ಅವರಿಗೆ ಕರೆ ಬಂತು. ಡಾಟಾ ಎಂಟ್ರಿ ಜಾಬ್‌ ಇದೆ, ಒಂದು ಪೇಜ್‌ ಗೆ 150 ರೂ. ಕೊಡುತ್ತೇವೆ, ವಾರಕ್ಕೆ ಎಷ್ಟು ಪೇಜ್‌ ಮಾಡುತ್ತೀರೊ ಅಷ್ಟು ಹಣ ನಿಮ್ಮ ಖಾತೆಗೆ ಜಮೆಯಾಗುತ್ತದೆ. ನಿಮ್ಮ ಅಪ್ಲಿಕೇಶನ್‌ ವೆರಿಫಿಕೇಶನ್‌ ಮಾಡಲು 1,200 ರೂ. ಕೊಡಿ ಎಂದು ಹೆಣ್ಣೊಬ್ಬಳು ಕನ್ನಡದಲ್ಲೇ ಸ್ಪಷ್ಟವಾಗಿ ಮಾತನಾಡಿ ಹೇಳಿದಳು .

ಹಣ ರವಾನಿಸಲು ಬ್ಯಾಂಕ್‌ ಖಾತೆ ನಂಬರ್‌, ಐಎಫ್ಎಸ್‌ಸಿ ಕೋಡ್‌ ಇತ್ಯಾದಿ ಮಾಹಿತಿಗಳನ್ನು ಕೂಡ ಕಳುಹಿಸಿದರು. ಆಕೆಯ ಹೇಳಿಕೆಯಿಂದ ಸಂಶಯಗೊಂಡ ಯುವಕ ನಿಮ್ಮನ್ನು ನಂಬುವುದು ಹೇಗೆ? ಆಫೀಸ್‌ ಅಡ್ರೆಸ್‌ ಕೊಡಿ ಕಚೇರಿಗೆ ಬರುತ್ತೇನೆ ಎಂದು ಹೇಳಿದಾಗ ಉಡುಪಿ ಹಳೆ ತಾಲೂಕು ಕಚೇರಿ ಸಮೀಪದ ಒಂದು ವಿಳಾಸ ನೀಡಿದಳು ಮತ್ತು ಇಲ್ಲಿಗೆ ಬಂದರೆ ನಿಮ್ಮಿಂದ ಹೆಚ್ಚು ಹಣ ಪಡೆದುಕೊಳ್ಳುತ್ತಾರೆ. ಈಗಲೇ ಹಣ ಕೊಟ್ಟರೆ ನಿಮ್ಮ ನೌಕರಿ ಕಾದಿರಿಸುತ್ತೇವೆ ಎಂದಳು. ಅವಳ ಮಾತನ್ನು ನಂಬಿದ ಯುವಕ ತಂಗಿಯಿಂದ ಪಡೆದು 1,200 ರೂ. ಆಕೆ ಹೇಳಿದ ಬ್ಯಾಂಕ್‌ ಖಾತೆಗೆ ಹಾಕಿದರು. ಆದರೆ ಯುವಕನಿಗೆ ಇನ್ನೂ ಕೆಲಸದ ಕರೆ ಬಂದಿಲ್ಲ.ಇಂದು ಬರಬಹುದು, ನಾಳೆ ಬರಬಹುದು ಎಂದು 10-12 ದಿನ ಕಾದು ನಿರಾಶರಾಗಿ ಮರಳಿ ಆ ನಂಬರ್‌ಗೆ ಫೋನ್‌ ಮಾಡಿದಾಗ ಅವರ ನಂಬರನ್ನೇ ಬ್ಲಾಕ್‌ ಮಾಡಿದ್ದಳು ಕಿಲಾಡಿ ಹೆಣ್ಣು.

ಆಕೆ ಕಳುಹಿಸಿದ ಬ್ಯಾಂಕ್‌ ಖಾತೆ ನಂಬರ್‌ ಆಧಾರದಲ್ಲಿ ಬ್ಯಾಂಕಿನವರಿಗೆ ಫೋನ್‌ ಮಾಡಿ ವಂಚನೆ ವಿವರಗಳನ್ನು ತಿಳಿಸಿ ಸಂಬಂಧಿಸಿದ ಖಾತೆದಾರರ ಮಾಹಿತಿ ಕೇಳಿದಾಗ ಗ್ರಾಹಕರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬ ಉತ್ತರ ಬಂತು. ಉದ್ಯೋಗದ ಆಸೆಗಾಗಿ ಹಣ ಕಳೆದುಕೊಂಡ ಯುವಕ ಈಗ ಪರಿತಪಿಸುತ್ತಿದ್ದಾರೆ

See also  ಡಾ.ಜಿ. ಶಂಕರ್ ಸ. ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಮಿತಿ ಸಭೆ.

LEAVE A REPLY

Please enter your comment!
Please enter your name here